ರಾಜ್ಯದಲ್ಲಿ ಝೀಕಾ ವೈರಸ್ಗೆ ಮೊದಲ ಬಲಿ; ಶಿವಮೊಗ್ಗದಲ್ಲಿ 73 ವರ್ಷದ ವೃದ್ಧ ಸಾವು ಜೀಕಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ 73 ವರ್ಷದ ವೃದ್ಧರೊಬ್ಬರು ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬೆಂಗಳೂರು: ರಾಜ್ಯದಲ್ಲಿ ಝೀಕಾ ವೈರಸ್ಗೆ ಮೊದಲ ಬಲಿಯಾಗಿದ್ದು, ಶಿವಮೊಗ್ಗದಲ್ಲಿ ಜೀಕಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ 73 ವರ್ಷದ ವೃದ್ಧರೊಬ್ಬರು ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಝೀಕಾ ವೈರಸ್ ಲಕ್ಷಣಗಳಿದ್ದ ವೃದ್ಧನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೋಮಾರ್ಬಿಟಿಸ್ ಇದ್ದು, ಜೊತೆಗೆ ಝೀಕಾ ವೈರಸ್ ಅಟ್ಯಾಕ್ ಆಗಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.ರಾಜ್ಯದಲ್ಲಿ ಇದುವರೆಗೂ ಒಟ್ಟು 9 ಜೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಶಿವಮೊಗ್ಗದಲ್ಲಿ 3, ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ 6 ಜನರಿಗೆ ಜೀಕಾ ವೈರಸ್ ಸೋಂಕು ದೃಢಪಟ್ಟಿದೆ.ಬೆಂಗಳೂರಿನಲ್ಲಿ ಜೀಕಾ ವೈರಸ್ ಪತ್ತೆಯಾದವರಲ್ಲಿ ಒಬ್ಬರು ಗರ್ಭಿಣಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ.